ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ :ಮುಸ್ಲಿಂ ಮುತ್ತಹಿದ ಮಹಾರ್ನ ಸದಸ್ಯ ಮುನಿರ್ ಅಹಮ್ಮದ್

 

ಶಿವಮೊಗ್ಗ: ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ದೂಷಿಸುವುದು ಸರಿಯಲ್ಲ ಎಂದು ಮುಸ್ಲಿಂ ಮುತ್ತಹಿದ ಮಹಾರ್ನ ಸದಸ್ಯ ಮುನಿರ್ ಅಹಮ್ಮದ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.3 ರಂದು ನಡೆದ ನಾಗೇಶ್ ಮತ್ತು ಅಮಾಯಕರ ಮೇಲೆ ನಡೆದ ಹಲ್ಲೆಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಆದರೆ ಇದೇ ಸಂದರ್ಭದಲ್ಲಿ ಕೆಲವು ರಾಜಕಾರಣಿಗಳು ಕಿಡಿಗೇಡಿಗಳ ಕೃತ್ಯವನ್ನೆ ಇಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಬೇಜವಾಬ್ದಾರಿ ಹೇಳಿಕೆ ನೀಡಿ ಶಾಂತಿ ಕದಡಿದ್ದಾರೆ ಮತ್ತು ಧಾರ್ಮಿಕ ಆಚರಣೆಗಳನ್ನು ಮಾಡಲು ಬಿಡದಿರುವುದು ಖಂಡನೀಯ ಎಂದರು.

ಎಲ್ಲ ಧರ್ಮದಲ್ಲೂ ಕಿಡಿಗೇಡಿಗಳು, ಗೂಂಡಾಗಳು ಇದ್ದೇ ಇರುತ್ತಾರೆ. ಯಾವ ಧರ್ಮವು ಗೂಂಡಾಗಿರಿಯನ್ನು ಒಪ್ಪುವುದಿಲ್ಲ ಮತ್ತು ಇಂತಹ ಘಟನೆಗಳನ್ನು ಲವ್ ಜಿಹಾದ್, ಗೋ ಹತ್ಯೆ ಮುಂತಾದವುಗಳಿಗೆ ತಳುಕು ಹಾಕಿ ಅನಾವಶ್ಯಕವಾಗಿ ಬೆಂಕಿ ಹಚ್ಚುವ ರಾಜಕಾರಣಿಗಳು ಶಾಂತಿ ಕದಡಲು ಕಾರಣರಾಗಿದ್ದಾರೆ ಎಂದು ಟೀಕಿಸಿದರು.

ಮಾತಿನ ಕಿಡಿ ಹಚ್ಚುವವರು ಕಿಡಿಗೇಡಿಗಳೇ ಆಗಿರುತ್ತಾರೆ. ಮಾನವೀಯತೆ ಮರೆತು ಧರ್ಮಗಳ ನಡುವೆ ವೈಷಮ್ಯ ರೂಪ ಬೆಳೆಸುವುದು ಸರಿಯಲ್ಲ. ಮುಸ್ಲಿಮರು ಭಾರತದ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದ ಅಡಿಯಲ್ಲಿ ಭಾರತೀಯ ಪ್ರಜೆಗಳಾಗಿಯೇ ಇದ್ದಾರೆ. ಗೋ ಮಾಂಸ ಎನ್ನುವುದು ಒಂದು ಆಹಾರ ಪದ್ದತಿ ಮಾತ್ರ ಅಷ್ಟೇ ಎಂದರು.

ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಮುಂದುವರೆಸಿರುವುದು ಸಾಮಾನ್ಯರ ಬದುಕು ಕಸಿದುಕೊಂಡಂತಾಗಿದೆ. ಕೊರೋನಾ ಸಂದರ್ಭದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ ಜನರಿಗೆ ಇದು ಮತ್ತಷ್ಟು ಸಂಕಟ ತಂದೊಡ್ಡುತ್ತದೆ ಎಂದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದ ಬಾಲಕಿಯ ಮೇಲಿನ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿದ ಅವರು, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಇಂತಹ ಕೃತ್ಯಗಳು ಮತ್ತೆ ಮರುಕಳಿಸಬಾರದು ಎಂದ ಅವರು, ರೈತ ಹೋರಾಟವನ್ನು ನಮ್ಮ ಸಂಘಟನೆ ಬೆಂಬಲಿಸುತ್ತದೆ ಎಂದರು.

ಶಿವಮೊಗ್ಗದ ಸಾರ್ವಜನಿಕರು ಯಾವ ಸುಳ್ಳು ಸುದ್ದಿಗಳನ್ನು ನಂಬಬಾರದು, ಹರಡಬಾರದು, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡಬೇಕು, ಸೈತಾನ ಕೃತ್ಯಗಳು ಯಾವ ಧರ್ಮದಲ್ಲಿ ನಡೆದರೂ ಅವು ಖಂಡನೀಯವಾದುದ್ದೇ ಎಂದರು.

ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಯುವಕರನ್ನು ಸೇರಿದಂತೆ ಅನೇಕ ಅಮಾಯಕರನ್ನು ಬಂಧನ ಮಾಡಿ ಕೇಸ್ ಹಾಕಲಾಗಿದೆ. ಇದು ಸರಿಯಲ್ಲ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಿಜವಾದ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಅಧ್ಯಕ್ಷ ಪರ್ವೀಜ್ ಅಹಮ್ಮದ್, ಸೈಯದ್ ಇಕ್ಬಾಲ್ ಪಾಷ್, ಅಬ್ದುಲ್ ವಾಹಬ್, ಉಬೇದುಲ್ಲಾ, ಖುರೇಷಿಯಾ ಮುಂತಾದವರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.