ಭಾರತೀಯರ ನೆಮ್ಮದಿಯ ಬದುಕಿಗೆ ಸೈನಿಕರ ಕೊಡುಗೆ ಅಪಾರ : ಚಿದಾನಂದ ವಟಾರೆ
ಶಿವಮೊಗ್ಗ, ಡಿಸೆಂಬರ್ 07 : ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ನೆಮ್ಮದಿಯಿಂದ ನೆಲೆಸಲು, ಜೀವನ ನಿರ್ವಹಿಸಲು, ಅಭಿವೃದ್ಧಿ ಕಾರ್ಯಗಳು ತೀವ್ರಗತಿಯಲ್ಲಿ ಮುಂದುವರೆಯುವಲ್ಲಿ ದೇಶದ ಸೈನಿಕರ ಪಾತ್ರ ಹಿರಿದುದಾಗಿದೆ ಎಂದು ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಹೇಳಿದರು.
ಅವರು ಇಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಸಶಸ್ತ್ರಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಧ್ವಜ ಚೀಟಿ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತೀಯ ವಾಯುಸೇನೆ, ಭೂಸೇನೆ ಮತ್ತು ನೌಕಾಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೌರವ ಸಲ್ಲಿಸುವ ಅಪೂರ್ವ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಹರ್ಷದಿಂದ ಸಂಭ್ರಮಿಸುವ ಸಂಗತಿಯಾಗಿದೆ ಎಂದರು.
ಗಡಿಭಾಗದಲ್ಲಿ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ನಿಸ್ವಾರ್ಥರಾಗಿ ಹೋರಾಡುವ ಪ್ರತಿ ಕ್ಷಣವೂ ರೋಮಾಂಚನಕಾರಿಯಾದುದು. ಅವರ ನಿರಂತರ ಶ್ರಮಕ್ಕೆ ಭಾರತೀಯರೆಲ್ಲರೂ ಸೈನಿಕರ ಕುಟುಂಬದ ಅವಲಂಬಿತರೆಲ್ಲರೂ ನೆಮ್ಮದಿಯಿಂದ ಸಂತೋಷದಿಂದಿರಲು ಅಗತ್ಯ ವಾತಾವರಣ ಕಲ್ಪಿಸಿಕೊಡಬೇಕಲ್ಲದೇ ನೈತಿಕವಾಗಿ ಜೊತೆಗಿರುವ ಭರವಸೆ ನೀಡಬೇಕೆಂದವರು ನುಡಿದರು.
ಮನುಷ್ಯ ತನ್ನ ಜೀವಿತಾವಧಿಯ ಕೊನೆಯ ಕ್ಷಣದವರೆಗೂ ಸೈನಿಕರನ್ನು ನೆನಪಿಸಿಕೊಳ್ಳುವ ಅಗತ್ಯವಿದೆ ಎಂದ ಅವರು, ಸೈನಿಕರಿಗೆ ಗೌರವ ಸಲ್ಲಿಕೆ ಮಾಡುವುದು ಈ ದಿನಾಚರಣೆಯ ಮೂಲ ಉದ್ದೇಶ. ಇದರೊಂದಿಗೆ ಯುದ್ದದಲ್ಲಿ ಗಾಯಗೊಂಡವರಿಗೆ ಪುನರ್ವಸತಿ, ಸೇವೆ ಸಲ್ಲಿಸುತ್ತಿರುವ ಸಿಬ್ಬಂಧಿ ಮತ್ತು ಅವರ ಕುಟುಂಬಗಳ ಕಲ್ಯಾಣ, ನಿವೃತ್ತ ಸೈನಿಕರು ಮತ್ತು ಅವರ ಕುಟುಂಬಗಲ ಪುನರ್ವಸತಿ ಮತ್ತು ಕಲ್ಯಾಣ ಆಗಬೇಕೆಂಬುದೂ ಆಶಯಗಳಲ್ಲೊಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ಉಪನಿರ್ದೇಶಕ ಡಾ|| ಸಿ.ಎ.ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಮಹತ್ವದ ದಿನದಂದು ಸೈನಿಕರು ಮಾತ್ರವಲ್ಲ ಸಮುದಾಯದ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಈ ದಿನಾಚರಣೆಯನ್ನು ಹಬ್ಬದಂತೆ ಆಚರಿಸುವಂತಾಗಬೇಕು ಎಂದ ಅವರು ಧ್ವಜಗಳ ಮಾರಾಟದಿಂದ ಸಂಗ್ರಹಿಸುವ ಹಣವನ್ನು ಸೈನಿಕರ ಕಲ್ಯಾಣಕ್ಕಾಗಿಯೇ ಉಪಯೋಗಿಸುವ ಕಾರಣದಿಂದಾಗಿ ಪ್ರತಿಯೊಬ್ಬರೂ ಧ್ವಜ ಖರೀದಿಸಿ, ಸೈನಿಕರಿಗೆ ಗೌರವಪೂರ್ವಕ ನಮನ ಸಲ್ಲಿಸಬೇಕು ಹಾಗೂ ಬೆಂಬಲಕ್ಕೆ ನಿಲ್ಲಬೇಕೆಂದರು.
ಈ ಸಂದರ್ಭದಲ್ಲಿ ನಿವೃತ್ತ ಕರ್ನಲ್ ರಘುನಾಥ್ ಅವರು ಮಾತನಾಡಿದರು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣರೆಡ್ಡಿ, ಆನಂದರಾವ್ ಸೇರಿದಂತೆ ನಿವೃತ್ತ ಸೈನಿಕರು, ಅವರ ಕುಟುಂಬದ ಅವಲಂಬಿತರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ವಾಣಿ ಮತ್ತು ಸಂಗಡಿಗರಿಂದ ಆರಂಭವಾದ ಕಾರ್ಯಕ್ರಮದಲ್ಲಿ ಆರ್.ಮಾರುತಿ ನಿರೂಪಿಸಿ, ಶ್ರೀಮತಿ ನಯನ ವಂದಿಸಿದರು.
Leave a Comment