ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ:ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ABVP ವತಿಯಿಂದ ಪ್ರತಿಭಟನೆ
ಶಿವಮೊಗ್ಗ: ಜಿಲ್ಲೆಯಲ್ಲಿ ಅತ್ಯಾಚಾರದಂತಹ ಅಮಾನವೀಯ ಘಟನೆಗಳು ನಡೆಯುತ್ತಿದ್ದು ಪ್ರಕರಣದ ಆರೋಪಿಗಳಿಗೆ
ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗ ಪೀಡಿತ ತಾಯಿಯ ಆರೈಕೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಈ ಘಟನೆ ಮಾಸುವ ಮುನ್ನವೇ ಸಾಗರದಲ್ಲೂ ಸಹ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಎರಡು ಘಟನೆಗಳ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಪ್ರಕರಣದ ಸಂತ್ರಸ್ಥರಿಗೆ ಸೂಕ್ತ ನ್ಯಾಯ ಒದಗಿಸಬೇಕು ಹಾಗೂ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಮಂಜುನಾಥ, ಪ್ರೇಮ್ ಕುಮಾರ್, ರಾಘವೇಂದ್ರ, ಅರವಿಂದ್, ವಿವೇಕ್ ಸೇರಿದಂತೆ ಹಲವರಿದ್ದರು.
Leave a Comment