ಡಿಸೆಂಬರ್ ಮಾಹೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ
ಶಿವಮೊಗ್ಗ, ನವೆಂಬರ್ 30: ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಕೇಂದ್ರೀಕೃತವಾಗಿರಿಸಿಕೊಂಡು ಮನೆ ಭೇಟಿಯ ಮೂಲಕ ಸಕ್ರಿಯವಾಗಿ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಸದುದ್ದೇಶದಿಂದ ಜಿಲ್ಲೆಯಾದ್ಯಂತ ಡಿಸೆಂಬರ್ 01ರಿಂದ 31ರವರೆಗೆ ಕ್ಷಯರೋಗ ಚಿಕಿತ್ಸಾ ಆಂದೋಲನ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ.15ರಿಂದ 20ರವರೆಗೆ ಆಯ್ದ ಪ್ರದೇಶಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆಹಚ್ಚುವ ಆಂದೋಲನವನ್ನು ಏರ್ಪಡಿಸಿದೆ. ವಿಶೇಷವಾಗಿ ಕೊಳಚೆ ಪ್ರದೇಶಗಳು, ವೃದ್ಧಾಶ್ರಮ, ಅನಾಥಾಶ್ರಮ, ಖೈದಿಗಳು, ಕಲ್ಲುಕ್ವಾರಿಗಳು, ಗಾರ್ಮೆಂಟ್ಸ್‍ಗಳು, ಹೆಚ್.ಐ.ವಿ ಸೋಂಕಿತರು, ಹೊಗೆ ತುಂಬುವಂತಹ ಕಾರ್ಖಾನೆಗಳು, ಕ್ಷಯರೋಗಿಗಳು ಇರುವಂತಹ ಪ್ರದೇಶಗಳು ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಸುಲಭವಾಗಿ ಸಿಗದಿರುವಂತಹ ದೂರದ ಪ್ರದೇಶಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದವರು ನುಡಿದರು.
ಅಲ್ಲದೇ ಮನೆಮನೆ ಭೇಟಿಗಾಗಿ ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಓರ್ವ ಆಶಾ ಕಾರ್ಯಕರ್ತೆ ಮತ್ತು ಮತ್ತೊಬ್ಬ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿ, ಆರೋಗ್ಯ ಕಾರ್ಯಕರ್ತರು ಇರಲಿದ್ದಾರೆ. ಆಯ್ದ ಜನಸಂಖ್ಯೆ ಮತ್ತು ಪ್ರದೇಶಗಳಲ್ಲಿ ಈ ತಂಡದ ಸದಸ್ಯರು ಮನೆ ಭೇಟಿ ಮಾಡಿ ಕ್ಷಯರೋಗದ ಲಕ್ಷಣಗಳನ್ನು ಮನೆಯ ಸದಸ್ಯರೆಲ್ಲರಿಗೂ ತಿಳಿಸಿ ಕ್ಷಯ ರೋಗದ ಲಕ್ಷಣಗಳಿರುವವರಿಗೆ ಕಫದ ಮಾದರಿಯನ್ನು ಸಂಗ್ರಹಿಸಿ ಅಂದೇ ಪ್ರಯೋಗಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು ಎಂದ ಅವರು, ಸಾರ್ವಜನಿಕ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂಧಿಗಳಿಗೆ ಸಹಕರಿಸುವಂತೆ ಮತ್ತು ಸರಿಯಾದ ಮಾಹಿತಿ ನೀಡಿ ಕ್ಷಯರೋಗ ಮುಕ್ತ ಶಿವಮೊಗ್ಗ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಿಂದ ರಾಷ್ಟ್ರದ ಆರೋಗ್ಯ ಸ್ಥಿತಿಯಲ್ಲಿ ಮಹತ್ವದ ಬದಲಾವಣೆಯ ನಿರೀಕ್ಷೆ ಇದ್ದು, ಈ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನದಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದ ಅವರು, ಈ ಸಂಬಂಧ ಈಗಾಗಲೇ ಆಶಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂಧಿಗಳಿಗೆ ತರಬೇತಿ ನೀಡಲಾಗಿದೆ ಎಂದವರು ನುಡಿದರು.
ಈ ಆಂದೋಲನದಲ್ಲಿ ಕಂಡುಹಿಡಿದ ಖಚಿತ ಪ್ರಕರಣಗಳಿಗೆ ಚಿಕಿತ್ಸಾ ಅವಧಿಯಲ್ಲಿ ಪೌಷ್ಠಿಕ ಆಹಾರಕ್ಕಾಗಿ ಪ್ರತಿ ತಿಂಗಳು ರೂ.500/-ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಹಾಗೂ ಖಾಸಗಿ ವೈದ್ಯರುಗಳಿಗೆ ಒಂದು ಪ್ರಕರಣ ಕಂಡುಹಿಡಿದು ವರದಿ ನೀಡಿದರೆ ಪ್ರೋತ್ಸಾಹಧನವಾಗಿ ರೂ.500/-ಗಳನ್ನು ನೀಡಲಾಗುವುದು. ಅಲ್ಲದೇ ರೋಗಿಗೂ ಸಹ ಚಿಕಿತ್ಸಾ ಅವಧಿಯಲ್ಲಿ ರೂ.500/-ಗಳನ್ನು ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
ಕೊರೋನ : ಕೊರೋನ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಶೀಘ್ರದಲ್ಲಿ ಔಷಧವನ್ನು ರವಾನಿಸುವ ಸಂಭವವಿದ್ದು, ಮೊದಲ ಹಂತವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂಧಿಗಳು ಸೇರಿದಂತೆ ಒಟ್ಟು 20,549ಜನರಿಗೆ ಈ ಲಸಿಕೆಯನ್ನು ವಿತರಿಸಲು ಕ್ರಮ ವಹಿಸಲಾಗುವುದು ಎಂದರು.
ಈ ಔಷಧದ ಸಾಮಥ್ರ್ಯಕ್ಕೆ ತಕ್ಕಂತೆ ವ್ಯವಸ್ಥಿತ ದಾಸ್ತಾನು ಮಾಡಲು ಶೀತಲೀಕರಣ ಘಟಕಗಳನ್ನು ಕಾಯ್ದಿರಿಸಬೇಕಾದ ಅಗತ್ಯವಿದೆ. 114ಕಡೆಗಳಲ್ಲಿ 140ಲೀ. ಸಾಮಥ್ರ್ಯದ ಸರ್ಕಾರಿ ಘಟಕಗಳು, 11ಕಡೆಗಳಲ್ಲಿ 300ಲೀ. ಸಾಮಥ್ರ್ಯದ, 18ಕಡೆಗಳಲ್ಲಿ 140ಲೀ. ಸಾಮಥ್ರ್ಯ ಹೊಂದಿರುವ ಪಶುಪಾಲನಾ ಇಲಾಖೆಯ ಘಟಕಗಳು ಹಾಗೂ 04ಕಡೆಗಳಲ್ಲಿ 60,000ಲೀ. ಭಾರೀ ಸಾಮಥ್ರ್ಯದ ವಾಕ್‍ಇನ್‍ಕೂಲರ್‍ಗಳು ಲಭ್ಯವಿರುವುದಾಗಿ ಆರೋಗ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೋನ ನಿಯಂತ್ರಣದಲ್ಲಿದೆ ಆದರೂ ಮುಂದಿನ ದಿನಗಳಲಿ ಎರಡನೇ ಅಲೆ ಬರುವ ಸಂಭವವಿರುವ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ ಸ್ಯಾನಿಟೈಜರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ತಪ್ಪಿದಲ್ಲಿ ನಿಯಮಾನುಸಾರ ದಂಡವಿಧಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನುರಾಧ ಜಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಯೋಜನಾ ನಿರ್ದೇಶಕ ಡಾ||ನಾಗೇಂದ್ರ ಎಫ್.ಹೊನ್ನಳ್ಳಿ, ಆರ್.ಸಿ.ಹೆಚ್.ಅಧಿಕಾರಿ ಡಾ|| ನಾಗರಾಜ್‍ನಾಯ್ಕ್ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Leave a Comment