ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ಐವರ ವಿರುದ್ದ ಪ್ರಕರಣ ದಾಖಲು


ಸಾಗರ : ತಂತಿಬೇಲಿಗೆ ಹರಿಸಲಾಗಿದ್ದ ವಿದ್ಯುತ್‌ನಿಂದ ಕಾಡುಹಂದಿಯನ್ನು ಕೊಂದು ಮಾಂಸವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಆರೋಪದ ಮೇರೆಗೆ ಕಾರ್ಗಲ್ ಪ್ರಾದೇಶಿಕ ವಲಯದ ಅರಣ್ಯ ಇಲಾಖೆ ಅಧಿಕಾರಿಗಳು ಐವರ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ. 

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಗಲ್ ವಾಸಿ ಮಣಿ ಎಂಬಾತನನ್ನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದ ಆರೋಪಿಗಳಾದ ರಾಜು, ತಿರುಮಲೈ, ಗೋವರ್ಧನ್, ಮೇಘರಾಜ್ ತಪ್ಪಿಸಿಕೊಂಡಿದ್ದಾರೆಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಛಾಯಾ ಮಾಹಿತಿ ನೀಡಿದ್ದಾರೆ. 

ಮಂಡವಳ್ಳಿ ಗ್ರಾಮದ ಗೋವರ್ಧನ್ ಎಂಬುವವರ ತೋಟಕ್ಕೆ ಹರಿಸಲಾಗಿದ್ದ ತಂತಿ ಬೇಲಿಯ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿದ ಕಾಡುಹಂದಿಯು ಮೃತಪಟ್ಟಿತ್ತು. ಆರೋಪಿಗಳು ಕಾಡುಹಂದಿಯ ತಲೆ ಹಾಗೂ ಕರುಳಿನ ಹಿಂಭಾಗವನ್ನು ಅಲ್ಲಿಯೇ ಮಣ್ಣಲ್ಲಿ ಹೂತು ಉಳಿದ ಮಾಂಸವನ್ನು ತಿರುಮಲೈ ಮತ್ತು ಮಣಿ ಎನ್ನುವವರು ಬೈಕ್‌ನಲ್ಲಿ ಕಾರ್ಗಲ್‌ನ ಭಾಗ್ಯ ಮಂದಿರ ಕಾಲೋನಿಗೆ ತಂದಿದ್ದರು ಎನ್ನುವ ಮಾಹಿತಿ ಆರೋಪಿ ನೀಡಿದ್ದಾನೆ ಎಂದರು. 

ಬುಧವಾರ ಮದ್ಯಾಹ್ನ ಕಚೇರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಭಾಗ್ಯ ಮಂದಿರದ ತೋಟದ ಮನೆಯೊಂದರ ಮೇಲೆ ದಾಳಿ ಮಾಡಿದ ಸಂದರ್ಭ ಮಣಿ ಎನ್ನುವವನು ಮಾತ್ರ ಸಿಕ್ಕಿ ಬಿದ್ದಿದ್ದು ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳಿಂದ ಸುಮಾರು 40ಕೆಜಿ ಮಾಂಸ, ಮೃತಪಟ್ಟ ಹಂದಿಯ ತಲೆ, ನಾಲ್ಕು ಕಾಲು, ಚಾಕು ಹಾಗೂ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. 

ಪ್ರಕರಣವನ್ನು ಭೇದಿಸುವಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶ್ರೀಧರ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಛಾಯಾ, ಸಹಾಯಕ ಅರಣ್ಯಾಧಿಕಾರಿಗಳಾದ ಮೈಲಾರಪ್ಪ, ಪ್ರಮೋದ್, ಅರಣ್ಯ ರಕ್ಷಕರಾದ ಇರ್ಫಾನ್, ವಿಶಾಲಾಕ್ಷಿ, ಹನುಮಕ್ಕ ಭಾಗವಹಿಸಿದ್ದರು. 


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.