ಆರ್.ಎಂ.ಎಲ್. ನಗರ ಒಂದನೇ ಹಂತದಲ್ಲಿ ಒಳಚರಂಡಿ ಕಾಮಗಾರಿ ಮತ್ತು ನಿರಂತರ ನೀರಿನ ಸಂಪರ್ಕಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಸಚಿವ ಈಶ್ವರಪ್ಪರವರಿಗೆ ಮನವಿ
ಶಿವಮೊಗ್ಗ: ಆರ್.ಎಂ.ಎಲ್. ನಗರ 1 ನೇ ಹಂತದಲ್ಲಿ ಒಳಚರಂಡಿ ಕಾಮಗಾರಿ ಮತ್ತು ನಿರಂತರ ನೀರಿನ ಸಂಪರ್ಕ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಿವಾಸಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್.ಎಂ.ಎಲ್. ನಗರ ಒಂದನೇ ಹಂತದಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದೇ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.
ಬಡಾವಣೆಯ ಸುತ್ತಮುತ್ತ ಇರುವ ಬುದ್ಧನಗರ, ಮಂಜುನಾಥ ಬಡಾವಣೆ, ಎನ್.ಟಿ. ರಸ್ತೆ, ಬಸ್ ನಿಲ್ದಾಣ ಸುತ್ತಮುತ್ತಲಿನ ಪ್ರದೇಶಗಳಿಂದ ಚರಂಡಿ ನೀರು ಹರಿದು ಬರುತ್ತಿದ್ದು ಮಳೆಗಾಲದಲ್ಲಿ ಚರಂಡಿಗಳು ಉಕ್ಕಿಹರಿದು ಮನೆಯೊಳಗೆ ಕೊಳಚೆ ನೀರು ನುಗ್ಗುವುದು ಸರ್ವೇಸಾಮಾನ್ಯವಾಗಿದೆ. ಈ ಹಿಂದೆ ನಿರ್ವಹಿಸಿದ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಕಳಪೆಯಾಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು ನಿವಾಸಿಗಳಿಗೆ ಆಗಿರುವ ತೊಂದರೆ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿದ್ದರೂ ಆರ್.ಎಂ.ಎಲ್. ನಗರ ಒಂದನೇ ಹಂತದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ನಿವಾಸಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಸುತ್ತಮುತ್ತಲಿನ ಪ್ರದೇಶಗಳಿಂದ ಕೊಳಚೆ ನೀರು ಬಡಾವಣೆಗೆ ಬರದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಡಾವಣೆಯ ಚರಂಡಿಗಳ ವೈಜ್ಞಾನಿಕ ವಿಶ್ಲೇಷಣೆ ಮಾಡಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
Leave a Comment