ಈ ಬಾರಿ ಅತ್ಯಂತ ಸರಳವಾಗಿ ದಸರ ಆಚರಣೆ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ,  ಕರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಶಿವಮೊಗ್ಗ ನಗರದಲ್ಲಿ ಅತ್ಯಂತ ಸರಳವಾಗಿ ಸಾಂಪ್ರದಾಯಿಕವಾಗಿ ದಸರಾ ಹಬ್ಬವನ್ನು ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಬುಧವಾರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ದಸರಾ ಆಚರಣೆ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಕರೋನಾ ಎಲ್ಲೆಡೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ನಾವು ಈಗಾಗಲೇ ಹಲವಾರು ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೇವೆ. ಜನರನ್ನು ಸೇರಿರಿ ಕರೋನಾ ಹರಡಲು ನಾವು ಯಾವುದೇ ಕಾರಣಕ್ಕೂ ಅವಕಾಶ ಮಾಡಬಾರದು. ಈ ಹಿನ್ನೆಲೆಯಲ್ಲಿ ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ತೀರ್ಮಾನಿಸಿರುವಂತೆ ಅತ್ಯಂತ ಸರಳವಾಗಿ ದಸರಾ ಆಚರಿಸಲಾಗುವುದು ಎಂದು ಹೇಳಿದರು.

ಮುಜರಾಯಿ ದೇವಾಲಯಗಳಿಗೆ ಮಾತ್ರ ಅವಕಾಶ: ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಬನ್ನಿ ಕಾರ್ಯಕ್ರಮಕ್ಕೆ ಪ್ರತಿ ವರ್ಷದಂತೆ ಎಲ್ಲಾ ದೇವಾಲಯಗಳ ದೇವರನ್ನು ಈ ಬಾರಿ ಕರೆದುಕೊಂಡು ತರಲು ಅವಕಾಶವಿಲ್ಲ. ಶಿವಮೊಗ್ಗ ನಗರದ ಮುಜರಾಯಿ ಇಲಾಖೆ ದೇವಸ್ಥಾನಗಳಿಂದ ದೇವರನ್ನು ಕರೆ ತರಬಹುದಾಗಿದೆ. ಖಾಸಗಿ ದೇವಾಲಯಗಳ ದೇವರನ್ನು ಕರೆ ತರಲು ಅವಕಾಶವಿಲ್ಲ. ದೇವರನ್ನು ಕರೆ ತರುವ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ. ಸಾಂಕೇತಿಕವಾಗಿ ಬನ್ನಿ ಮಂಟಪಕ್ಕೆ ಕರೆ ತಂದು ವಿಧಿ ವಿಧಾನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಹಾಗೂ ಮನೆ ಸಮೀಪದ ದೇವಾಲಯಗಳಲ್ಲಿಯೇ ದಸರಾ ಆಚರಿಸಬೇಕು. ಬನ್ನಿಯನ್ನು ಶ್ರದ್ಧಾಪೂರ್ವಕ ತಮ್ಮ ದೇವರಿಗೆ ಸಮರ್ಪಿಸಬಹುದಾಗಿದೆ. ತಾನು ಸಹ ಈ ಬಾರಿ ಬನ್ನಿ ಕಡಿಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಗರಿಷ್ಟ ಅಲಂಕಾರ: ದಸರ ಸಂದರ್ಭದಲ್ಲಿ ಶಿವಮೊಗ್ಗ ನಗರಾದ್ಯಂತ ಪ್ರತಿವರ್ಷದಂತೆ ಗರಿಷ್ಟ ಅಲಂಕಾರ ಮಾಡಬೇಕು. ಚಂದ್ರಶೇಖರ ಆಜಾದ್ ಮೈದಾನದಲ್ಲಿ ನಡೆಯುವ ಬನ್ನಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸದೇ ಸಹಕರಿಸಬೇಕು. ದಸರಾ ಆಚರಣೆಯ ಎಲ್ಲಾ ಕಾರ್ಯಕ್ರಮಗಳನ್ನು ಟಿವಿ, ಇಂಟರ್‍ನೆಟ್ ಮೂಲಕ ನೇರ ಪ್ರಸಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಜನರು ಮನೆಯಲ್ಲಿಯೇ ಕುಳಿತು ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.