ಶಿವಮೊಗ್ಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

 


ಶಿವಮೊಗ್ಗ, : ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಹೊಸ ರೈಲು ಸಂಪರ್ಕ ಮತ್ತು ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗಳು ಅನುಷ್ಟಾನಗೊಳ್ಳುತ್ತಿದ್ದು, ಹೊಸದಾಗಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಪೂರಕವಾದ ವಾತಾವರಣವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.


ಅವರು ಶನಿವಾರ ಮಾಚೇನಹಳ್ಳಿಯಲ್ಲಿ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಕುರಿತು ಹಾಗೂ ಇತ್ತೀಚಿನ ಕಾರ್ಮಿಕ ಕಾನೂನು ತಿದ್ದುಪಡಿಗಳ ಕುರಿತು ಕಾಸಿಯಾ ಮತ್ತು ವಿವಿಧ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಆರಂಭಿಸಲು ರಸ್ತೆ ಸಂಪರ್ಕ, ವಿದ್ಯುತ್, ನೀರು ಪೂರೈಕೆಯಂತಹ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ, ಪ್ರತ್ಯೇಕ ವಿದ್ಯುತ್ ಸಬ್‍ಸ್ಟೇಷನ್ ನಿರ್ಮಾಣ ಇತ್ಯಾದಿ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಪರಿಹರಿಸಲಾಗುವುದು. ಕೃಷಿ ಆಧಾರಿತ ಕೈಗಾರಿಕೆಗಳು ಸೇರಿದಂತೆ ಹಲವು ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಜಿಲ್ಲೆಯಲ್ಲಿ ಉತ್ತಮ ಅವಕಾಶಗಳಿವೆ. ಕೋವಿಡ್ ಸಂದರ್ಭದಲ್ಲಿ ಬೇರೆ ನಗರಗಳಿಂದ ಜಿಲ್ಲೆಗೆ ವಾಪಾಸು ಬಂದಿರುವ ಪ್ರತಿಭಾವಂತರು ಕೈಗಾರಿಕೆ ಆರಂಭಿಸುವ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಅಂತಹವರಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.

ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಅವರು ಮಾತನಾಡಿ, ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತಮ ಅವಕಾಶಗಳಿವೆ. ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದರೆ ಹೂಡಿಕೆದಾರರು ಧೈರ್ಯದಿಂದ ಬಂಡವಾಳ ತೊಡಗಿಸಲು ಮುಂದೆ ಬರುತ್ತಾರೆ. ಅಂತಹ ಹೊಸ ಹೂಡಿಕೆದಾರರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕಿದೆ. ತೀರ್ಥಹಳ್ಳಿ ಭಾಗದಲ್ಲಿ ಹೊಸದಾಗಿ ಕೈಗಾರಿಕಾ ವಸಾಹತು ಆರಂಭಿಸಿದರೆ ಆ ಭಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡಬಹುದಾಗಿದೆ. ಶಿವಮೊಗ್ಗ ನಗರದಲ್ಲಿ ಹೊಸ ವಿಮಾನ ನಿಲ್ದಾಣ ಪ್ರಾರಂಭವಾಗಲಿದ್ದು, ಕೈಗಾರಿಕಾ ಜಿಲ್ಲೆಯಾಗಿ ಬೆಳೆಯುವ ಎಲ್ಲಾ ಅವಕಾಶಗಳಿವೆ ಎಂದು ಹೇಳಿದರು.


ಕರ್ನಾಟಕ ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಅವರು ಮಾತನಾಡಿ, ಸರ್ಕಾರ ಹೊಸದಾಗಿ ಘೋಷಿಸಿರುವ ಕೈಗಾರಿಕಾ ನೀತಿ ಕೈಗಾರಿಕೆಗಳಿಗೆ ಪೂರಕವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣವಿದ್ದು, ಇದರ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.

ನೂತನ ಕೈಗಾರಿಕಾ ನೀತಿ ಹಾಗೂ ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ್, ಹೊಸ ಕೈಗಾರಿಕಾ ನೀತಿಯಲ್ಲಿ ಹಲವು ವಿಶೇಷ ಪ್ರೋತ್ಸಾಹ ಹಾಗೂ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಅದರಲ್ಲಿ ಬಂಡವಾಳ ಹೂಡಿಕೆಗೆ ಸಹಾಯಧನ, ಮುದ್ರಾಂಕ ಶುಲ್ಕ ರಿಯಾಯಿತಿ, ಭೂ ಪರಿವರ್ತನಾ ಶುಲ್ಕ ಮರು ಪಾವತಿ, ವಿದ್ಯುತ್ ಸಹಾಯಧನ ಇತ್ಯಾದಿ ಪ್ರೋತ್ಸಾಹಗಳು ಸೇರಿವೆ ಎಂದರು.

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ನಿಗಮದ ಅಧ್ಯಕ್ಷ ಜ್ಯೋತಿ ಪ್ರಕಾಶ್ ಅವರು ಮಾತನಾಡಿದರು. ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ.ಎ.ರಮೇಶ ಹೆಗ್ಗಡೆ, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಮಂಡಳದ ಅಧ್ಯಕ್ಷ ಜೆ.ಆರ್.ವಾಸುದೇವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.