ಬಿ.ವಿ.ಕಾರಂತ ನುಡಿ ನಮನರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ: ಜೀವನರಾಂ ಸುಳ್ಯ

ಶಿವಮೊಗ್ಗ, ಸೆ.19: ಬಿ.ವಿ.ಕಾರಂತ ಅವರು ಕೇವಲ ಕನ್ನಡ ರಂಗಭೂಮಿಗೆ ಮಾತ್ರವಲ್ಲದೆ, ಇಡೀ ಭಾರತೀಯ ರಂಗಭೂಮಿಗೆ ಹೊಸ ಸ್ವರೂಪ ನೀಡಿದ ರಂಗ ದಿಗ್ಗಜ ಎಂದು ರಂಗ ಸಮಾಜ ಸದಸ್ಯ ಜೀವನರಾಂ ಸುಳ್ಯ ಅವರು ನೆನಪಿಸಿದರು.

ಶಿವಮೊಗ್ಗ ರಂಗಾಯಣದಲ್ಲಿ ಶನಿವಾರ ಬಿ.ವಿ.ಕಾರಂತ ಅವರ 91ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಮಾನ್ಯ ಹಿನ್ನೆಲೆಯಿಂದ ಬಂದು ಇಡೀ ಭಾರತೀಯ ರಂಗಭೂಮಿಗೆ ದಿಕ್ಸೂಚಿಯನ್ನು ತೋರಿದ ಬಿ.ವಿ.ಕಾರಂತ ಅವರು ಪಾಶ್ಚಾತ್ಯ ಸ್ವರೂಪದ ಪ್ರಭಾವದಲ್ಲಿದ್ದ ಭಾರತೀಯ ರಂಗಭೂಮಿಗೆ ಭಾರತೀಯತೆಯ ಸ್ಪರ್ಶವನ್ನು ಒದಗಿಸಿದವರು. ನನ್ನಂತಹ ಸಾವಿರಾರು ಕಲಾವಿದರಿಗೆ ರಂಗಭೂಮಿಯಲ್ಲಿ ನೆಲೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಬಿ.ವಿ.ಕಾರಂತ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗ ಸಮಾಜದ ಸದಸ್ಯ ರಾಜಾರಾಮ್ ಅವರು ಮಾತನಾಡಿ, ರಂಗಭೂಮಿಯ ಬಗ್ಗೆ ಸ್ಪಷ್ಟವಾದ ಕಲ್ಪನೆಯಿದ್ದ ಬಿ.ವಿ.ಕಾರಂತ ಅವರು ಭಾರತೀಯ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅವರ ನಾಟಕಗಳನ್ನು ಯುವ ಕಲಾವಿದರು ಹೆಚ್ಚೆಚ್ಚು ನೋಡುವ ಮೂಲಕ ಸ್ಪೂರ್ತಿಯನ್ನು ಪಡೆಯಬಹುದಾಗಿದೆ ಎಂದರು.

ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಬಿ.ವಿ.ಕಾರಂತ್, ಕನ್ನಡ ರಂಗಭೂಮಿಗೆ ಹೊಸ ಸ್ವರೂಪವನ್ನು ನೀಡಿದವರು ಎಂದರು. ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ ಜವಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿ.ವಿ.ಕಾರಂತ ಅವರು ರಾಜ್ಯದಲ್ಲಿ ರಂಗಾಯಣಗಳಿಗೆ ಹುಟ್ಟು ಹಾಕುವ ಮೂಲಕ ರಂಗಭೂಮಿಗೆ ಶಿಸ್ತನ್ನು ತಂದುಕೊಟ್ಟವರು ಎಂದರು. ರಂಗ ಸಮಾಜದ ಸದಸ್ಯರಾದ ಶಿವೇಶ್ವರ ಗೌಡ ಅವರು ಉಪಸ್ಥಿತರಿದ್ದರು. ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ವಂದಿಸಿದರು. ಮಧುರಾ ಕಲಾತಂಡದವರ ರಂಗ ಸಂಗೀತ ಕಾರ್ಯಕ್ರಮ ನಡೆಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.