ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಸೆ.16: ಮುಂದಿನ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಗಾಂಜಾ ಸೇರಿದಂತೆ ಡ್ರಗ್ಸ್ ನಿಯಂತ್ರಣಕ್ಕೆ ಯಾವುದೇ ಆಮಿಷಗಳಿಗೆ ಒಳಗಾಗದೆ, ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪೊಲೀಸರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬುಧವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಬಳಕೆ ಗಂಭೀರ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದನ್ನು ಸಂಪೂರ್ಣವಾಗಿ ಮಟ್ಟ ಹಾಕದಿದ್ದರೆ ನಮ್ಮ ಮನೆಯ ಒಳಗೆ ಬಂದು ಬಿಡುವ ಅಪಾಯವಿದೆ. ಜಿಲ್ಲೆಯಲ್ಲಿ ಪೊಲೀಸರು ಮಾದಕ ವಸ್ತುಗಳ ನಿಯಂತ್ರಣಕ್ಕೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಪೊಲೀಸರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮಾದಕ ವಸ್ತು ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಕರ್ತವ್ಯ ಲೋಪ ಎಸಗುವ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅವರು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿದರು.
ಎಸ್ಪಿ ಮಾಹಿತಿ: ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ನಿರಂತರ ದಾಳಿಗಳನ್ನು ನಡೆಸುವ ಮೂಲಕ ಮಾದಕ ವಸ್ತುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಶಾಲಾ ಕಾಲೇಜು ಪ್ರಾಂಶುಪಾಲರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. ಶಾಲಾ ಕಾಲೇಜು ಆವರಣದ ಸುತ್ತಮುತ್ತಲಿನ ಅಂಗಡಿಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ಎಂಟು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಗಾಂಜಾ ನಿಯಂತ್ರಿಸಲು ನಿರಂತರ ದಾಳಿಗಳನ್ನು ನಡೆಸಲಾಗಿದೆ. ಈ ಅವಧಿಯಲ್ಲಿ ಒಟ್ಟು 58ಪ್ರಕರಣಗಳಲ್ಲಿ 137 ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಒಟ್ಟು 120ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮಾದಕ ವಸ್ತುಗಳ ಲಭ್ಯತೆ, ಮಾರಾಟ ಇತ್ಯಾದಿಗಳ ಕುರಿತು ಮಾಹಿತಿ ದೊರೆತರೆ ನೇರವಾಗಿ ನನ್ನ ಮೊಬೈಲ್ ಸಂಖ್ಯೆ 9480803301 ಮಾಹಿತಿಯನ್ನು ನೀಡಬಹುದಾಗಿದ್ದು, ಅದನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ಹೇಳಿದರು.
ಸಲಹೆ: ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ಕಾಲೇಜು ಪ್ರಾಂಶುಪಾಲರು, ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ನಿಯಂತ್ರಿಸುವ ಕುರಿತು ಸಲಹೆ ನೀಡಿದರು. ಶಾಲೆಗಳಲ್ಲಿ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಕಾರ್ಯ ಆಗಬೇಕಿದ್ದು, ಮಾದಕ ವಸ್ತುಗಳ ಬಳಕೆ ಬಗ್ಗೆ ನಿರಂತರ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಶಾಲೆಗಳಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು. ನಗರದ ಉದ್ಯಾನವನಗಳು ಮಾದಕ ವ್ಯಸನಿಗಳ ಅಡ್ಡೆಯಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲೂ ವ್ಯಸನ ಹೆಚ್ಚಾಗುತ್ತಿದ್ದು, ಈ ಕುರಿತು ಗಮನ ಹರಿಸಬೇಕು ಎಂದು ಸಲಹೆಗಳನ್ನು ನೀಡಿದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಉಪಸ್ಥಿತರಿದ್ದರು.
Leave a Comment