ಮೆಗ್ಗಾನ್ ಆಸ್ಪತ್ರೆಯಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಕಾರ್ಯಾರಂಭ



ಶಿವಮೊಗ್ಗ, ಆ.28: ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್ ಕೊರತೆಯಾಗದಂತೆ ಖಾತ್ರಿಪಡಿಸುವ ಉದ್ದೇಶದಿಂದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಆರಂಭಿಸಲಾಗಿದೆ.

ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಅಳವಡಿಸಲು ಪ್ರಾಕ್ಸಿಯಾರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ 10ವರ್ಷಗಳ ಟೆಂಡರ್ ನೀಡಲಾಗಿದ್ದು, ಶುಕ್ರವಾರದಿಂದ ಆಕ್ಸಿಜನ್ ಸರಬರಾಜು ಆರಂಭಿಸಲಾಗಿದೆ ಎಂದು ಶಿವಮೊಗ್ಗ ಬೋಧನಾ ಆಸ್ಪತ್ರೆಯ ನಿರ್ದೇಶಕ ಡಾ.ಸಿದ್ಧಪ್ಪ ತಿಳಿಸಿದ್ದಾರೆ.

ಪ್ರಸ್ತುತ 13ಕೆ.ಎಲ್.ಡಿ ಸಾಮಥ್ರ್ಯದ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಕಾರ್ಯಾರಂಭ ಮಾಡಲಾಗಿದ್ದು, ಆಸ್ಪತ್ರೆಯ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗಲಿದೆ. ಕರೋನಾ ಪೀಡಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಯನ್ನು ಖಾತ್ರಿಪಡಿಸಲು ಪ್ಲಾಂಟ್ ಅಳವಡಿಸಲಾಗಿದೆ. ಕರೋನಾ ತೀವ್ರಗೊಂಡಂತೆ ಮೂಲ ತಯಾರಿಕಾ ಸಂಸ್ಥೆಗಳಿಂದ ಮೆಡಿಕಲ್ ಆಕ್ಸಿಜನ್ ಕೊರತೆ ಕಂಡು ಬಂದಿತ್ತು. ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ಲಭ್ಯವಿರುವುದರಿಂದ ಇನ್ನು ಮುಂದೆ ಆಕ್ಸಿಜನ್‍ಗೆ ಯಾವುದೇ ಕೊರತೆ ಉಂಟಾಗದು ಎಂದು ಅವರು ಹೇಳಿದ್ದಾರೆ.

ಆಕ್ಸಿಜನ್ ಅಗತ್ಯವಿರುವ ಕರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಹೆಚ್.ಎಫ್.ಎನ್.ಸಿ ಮತ್ತು ವೆಂಟಿಲೇಟರ್ ಉಪಕರಣಗಳನ್ನು ಬಳಸಲಾಗುತ್ತಿದೆ. ಒಬ್ಬ ವ್ಯಕ್ತಿಗೆ 10ರಿಂದ 60ಲೀಟರ್ ಪ್ರತಿ ನಿಮಿಷಕ್ಕೆ ಮೆಡಿಕಲ್ ಆಕ್ಸಿಜನ್ ಅವಶ್ಯಕವಿದ್ದು, ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯು 950ಹಾಸಿಗೆ ಸಾಮಥ್ರ್ಯ ಹೊಂದಿದ್ದು, ಕರೋನಾ ಪೀಡಿತರಿಗೆ ಸಮರ್ಪಕ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇನ್ನು ಮುಂದೆ ಯಾರಿಗೂ ಆಕ್ಸಿಜನ್ ಕೊರತೆಯಾಗುವುದಿಲ್ಲ. ಆಸ್ಪತ್ರೆ ಆವರಣದಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಅಳವಡಿಕೆಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.