ಆಕರ್ಷಕ ಕೃಷಿ ಮಳಿಗೆಗಳು, ಸಾವಿರಾರು ರೈತರ ಪಾಲ್ಗೊಳ್ಳುವಿಕೆ: ಕೃಷಿ ವಸ್ತು ಪ್ರದರ್ಶನ ಯಶಸ್ವಿ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ  ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಅಂಗವಾಗಿ  “ಕೃಷಿ ವಸ್ತು ಪ್ರದರ್ಶನ–2025” ಕಾರ್ಯಕ್ರಮವನ್ನು ಗ್ರಾಮ ಒನ್ ಕೇಂದ್ರ ಮುಂಭಾಗ, ಚುರ್ಚಿಗುಂಡಿ ಗ್ರಾಮದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರಿಗೆ ತಂತ್ರಜ್ಞಾನದ ಬೆಳಕನ್ನು ಚೆಲ್ಲುವಲ್ಲಿ ಕೃಷಿ ವಿದ್ಯಾರ್ಥಿಗಳು ವಹಿಸುತ್ತಿರುವ ಪಾತ್ರ ಶ್ಲಾಘನೀಯವಾಗಿದ್ದು, ಅವರ ಸೇವಾಭಾವ ಹಾಗೂ ಪರಿಶ್ರಮಕ್ಕೆ ಪ್ರೋತ್ಸಾಹ ನೀಡಿದರು.
ಜಿಲ್ಲೆಯ ರೈತರು ಎದುರಿಸುತ್ತಿರುವ ವಿವಿಧ ಸಂಕಷ್ಟಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ವಿವಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಕೃಷಿ ವಿವಿ ಸ್ಥಾಪನೆಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕೃಷಿ ವಿವಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಜಿಲ್ಲೆಯ ಪ್ರತಿಯೊಂದು ಹಳ್ಳಿಗೆ ತೆರಳಿ, ರೈತರ ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಪ್ರಾಯೋಗಿಕ ಪರಿಹಾರಗಳನ್ನು ನೀಡುವ ಕೆಲಸ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೂ ರೈತರಿಗೂ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ ಅವರು ಹೇಳಿದರು.

ಈ ಕೃಷಿ ವಸ್ತು ಪ್ರದರ್ಶನವು ಕೇವಲ ವಿದ್ಯಾರ್ಥಿಗಳ ಕಾರ್ಯಕ್ರಮವಲ್ಲ, ಇದು ನೇರವಾಗಿ ರೈತರಿಗೆ ಸಂಬಂಧಿಸಿದ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟ ಕೃಷಿಕ ಸಮಾಜದ ರಾಜ್ಯ ಘಟಕ ಅಧ್ಯಕ್ಷರಾದ ನಗರದ ಮಹದೇವಪ್ಪ ಅವರು, ಬೀಜೋಪಚಾರ, ಬೀಜಗಳ ಸ್ವಾವಲಂಬನೆ, ಸಾವಯವ ಕೃಷಿ ಪದ್ಧತಿಗಳ ಅಳವಡಿಕೆ, ರಸಗೊಬ್ಬರಗಳ ಗುಣಮಟ್ಟವನ್ನು ಗುರುತಿಸುವ ವಿಧಾನಗಳ ಕುರಿತು ರೈತರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ರೈತರು ಸಂಘಟಿತರಾಗಿ ತಮ್ಮ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಂಡುಕೊಳ್ಳುವತ್ತ ಪ್ರಯತ್ನಿಸಬೇಕು. ಈ ಮೂಲಕ ರೈತರು ಸ್ವತಃ ವಿಜ್ಞಾನಿಗಳಾಗಿ ರೂಪುಗೊಳ್ಳುವಂತಾಗಬೇಕು ಎಂದು ಅವರು ಕರೆ ನೀಡಿದರು.

ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವದ ಅಂಗವಾಗಿ ಆಯೋಜಿಸಿರುವ ಈ ಕೃಷಿ ವಸ್ತು ಪ್ರದರ್ಶನ ಅತ್ಯಂತ ಶ್ಲಾಘನೀಯವಾಗಿದ್ದು, ರೈತರ ಭಾರೀ ಪಾಲ್ಗೊಳ್ಳುವಿಕೆಯೇ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಆರ್.ಸಿ. ಜಗದೀಶ್ ಹೇಳಿದರು.
ವಿದ್ಯಾರ್ಥಿಗಳು ನೇರವಾಗಿ ರೈತರ ಜಮೀನಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಪ್ರಾತ್ಯಕ್ಷಿಕೆಗಳ ಮೂಲಕ ಪರಿಹಾರ ಮಾರ್ಗಗಳನ್ನು ಸೂಚಿಸಿರುವುದು ಅತ್ಯಂತ ಮೆಚ್ಚುಗೆಯಾಗಿದೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗಾಗಿ ಇನ್ನಷ್ಟು ಶ್ರಮವಹಿಸಿ, ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ಹೊಣೆಗಾರಿಕೆಯನ್ನು ಕೃಷಿ ವಿವಿ ವಹಿಸಿಕೊಳ್ಳಲಿದೆ ಎಂಬ ಭರವಸೆಯನ್ನು ಅವರು ನೀಡಿದರು.

ಕಾರ್ಯಕ್ರಮದಲ್ಲಿ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿ, ಅವಧಿಯಲ್ಲಿ ಗ್ರಾಮಗಳಲ್ಲಿ ನಡೆಸಿದ ಕಾರ್ಯಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಅನುಭವಗಳನ್ನು ಕೇಳಿದರು. ವಿದ್ಯಾರ್ಥಿಗಳು ರೈತರ ಹೊಲಗಳಲ್ಲಿ ನಡೆಸಿದ ಪ್ರಾತ್ಯಕ್ಷಿಕೆಗಳು, ಗುಂಪುಚರ್ಚೆಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಪರಿಚಯಿಸಿರುವ ನವೀನ ಕೃಷಿ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಂಡಾಗ ಮಾತ್ರ ಈ ರೀತಿಯ ಕಾರ್ಯಕ್ರಮಗಳ ಸಾರ್ಥಕತೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದೇಶ ಸೇವೆಗಾಗಿ ಸೈನಿಕರು ಇದ್ದಂತೆ ರೈತರ ಸೇವೆಗಾಗಿ ಕೃಷಿ ವಿದ್ಯಾರ್ಥಿಗಳು ಎಂದು ವಿವಿ ಶಿಕ್ಷಣ ನಿರ್ದೇಶಕರಾದ ಡಾ. ಬಿ ಹೇಮ್ಲಾ ನಾಯಕ್ ಅವರು ಮಾತನಾಡಿದರು.
ಚುರ್ಚಿಗುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ  ಹುಲ್ಮಾರ್ ಮಹೇಶ್, ಸಹಾಯಕ ಕೃಷಿ ನಿರ್ದೇಶಕ ಕಿರಣ್ ಕುಮಾರ್ ಹರ್ತಿ, ರುದ್ರೇಗೌಡ, ಸುರೇಶ ಗುಡ್ಡಳ್ಳಿ, ಬಿ.ಎಮ್ ಪಾಲಕ್ಶಪ್ಪ, ಎಸ್‌ಟಿ ವೀರೇಶ್ ,ಎಸ್ ಶಶಿಧರ್,  ಪರಮೇಶ್ವರಪ್ಪ ಹಾಗೂ ಇನ್ನಿತರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್‌ಸಿ (ಕೃಷಿ) ವಿದ್ಯಾರ್ಥಿಗಳನ್ನು ಗ್ರಾಮೀಣ ಕೃಷಿ ಕಾರ್ಯಾನುಭವ ಯೋಜನೆಯಡಿ ಶಿಕಾರಿಪುರ ತಾಲೂಕಿನ ಕಲ್ಮನೆ, ಚುರ್ಚಿಗುಂಡಿ, ಹಿತ್ತಲ, ಈಸೂರು ಹಾಗೂ ಚಿಕ್ಕಜೋಗಿಹಳ್ಳಿ ಎಂಬ ಐದು ಗ್ರಾಮಗಳಿಗೆ ಮೂರು ತಿಂಗಳ ಕಾಲ ಶಿಬಿರವನ್ನು ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಈ ಅವಧಿಯಲ್ಲಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ರೈತರೊಂದಿಗೆ ನೇರ ಸಂವಹನ ನಡೆಸಿ  ಸುಮಾರು 160ಕ್ಕು ಹೆಚ್ಚು ಗುಂಪುಚರ್ಚೆ, ಪ್ರಾತ್ಯಕ್ಷಿಕೆ  ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದು, ಪ್ರತಿ ಹಳ್ಳಿಯಲ್ಲೂ ಕೃಷಿ ಮಾಹಿತಿ ಕೇಂದ್ರ ಹಾಗೂ ಬೆಳೆ ಸಂಗ್ರಹಾಲಯವನ್ನು ನಿರ್ಮಿಸಿದ್ದರು, ಹಾಗೂ ರೈತರ ತೋಟಗಳನ್ನು ಪರಿಶೀಲಿಸಿ ಸರಿಯಾದ ಮಾಹಿತಿಯನ್ನು ಕೂಡ ಹಂಚಿದ್ದರು. ಈ ಕಾರ್ಯಾನುಭವದ ಸಮಾಪ್ತಿಯಾಗಿ, ಐದು ಗ್ರಾಮಗಳಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಕೃಷಿ ವಿದ್ಯಾರ್ಥಿಗಳು ಒಗ್ಗೂಡಿ ಚರ್ಚಿಗುಂಡಿ ಗ್ರಾಮದಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿದರು. 

ಕಾರ್ಯಕ್ರಮಕ್ಕೆ ಮುನ್ನ ಆಗಮಿಸಿದ ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗೌರವ ಸಲ್ಲಿಸಲಾಯಿತು.
ಈ ಮಹತ್ವದ ಕೃಷಿ ವಸ್ತು ಪ್ರದರ್ಶನದಲ್ಲಿ 90ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಸ್ಥಾಪನೆಯಾಗಿದ್ದವು, 
ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಸ್ವತಃ ನಿರ್ಮಿಸಿರುವ ತಾಂತ್ರಿಕ ಮಳಿಗೆಗಳು ಎಲ್ಲರ ಗಮನ ಸೆಳೆದವು. ಈ ಮಳಿಗೆಗಳಲ್ಲಿ ಭತ್ತದ ನವೀನ ತಂತ್ರಜ್ಞಾನಗಳ ಮಾಹಿತಿ, ಜೈವಿಕ ಗೊಬ್ಬರಗಳ ಉಪಯೋಗ, ಅಡಿಕೆ ಬೆಳೆಯ ವೈಜ್ಞಾನಿಕ ನಿರ್ವಹಣೆ, ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಮೆಕ್ಕೆಜೋಳ ಬೆಳೆಯ ಆಧುನಿಕ ತಂತ್ರಜ್ಞಾನ, ಸಾವಯುವ ಕೃಷಿ ಪದ್ಧತಿಗಳು, ಬಾಳೆ ಬೆಳೆಯ ಸುಧಾರಿತ ವಿಧಾನಗಳು, ಸಮಗ್ರ ಕೃಷಿ ಪದ್ಧತಿ, ಹೈನುಗಾರಿಕೆ ಮೊದಲಾದ ವಿಷಯಗಳ ಕುರಿತು ರೈತರಿಗೆ ನೇರ ಮಾಹಿತಿ ಹಾಗೂ ಪ್ರಾಯೋಗಿಕ ವಿಧಾನಗಳ ವಿವರಗಳನ್ನು ನೀಡಲಾಯಿತು.ಅಲಂಕೃತ ಹೋರಿಗಳು ಸಾರ್ವಜನಿಕರ ಗಮನ ಸೆಳೆದವು. ಮಾರಾಟ ಮಳಿಗೆಗಳನ್ನು ಅತಿಥಿಗಳು ವೀಕ್ಷಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ರೈತರು ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಉಪಯುಕ್ತ ಮಾಹಿತಿಯನ್ನು ಪಡೆದುಕೊಂಡರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.