ಕೃಷಿ ಜ್ಞಾನಕ್ಕೆ ಹೊಸ ದಾರಿ: ಹಿತ್ತಲ ಗ್ರಾಮದಲ್ಲಿ ಮಾಹಿತಿ ಕೇಂದ್ರ ಉದ್ಘಾಟನೆ
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಇದರ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಿಯೋಜಿಸಿರುವ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮಸ್ಥರಿಗಾಗಿ ಹಿತ್ತಲ ಗ್ರಾಮದಲ್ಲಿ ನಿರ್ಮಿಸಿರುವ ಕೃಷಿ ಸಹ್ಯಾದ್ರಿ ತಂಡದ ಮಾಹಿತಿ ಕೇಂದ್ರ ಹಾಗೂ ಕೈತೋಟವನ್ನು ಭವ್ಯವಾಗಿ ಉದ್ಘಾಟಿಸಲಾಯಿತು.
ರೈತರಿಗೆ ಅಗತ್ಯವಾದ ಎಲ್ಲ ರೀತಿಯ ಕೃಷಿ ಸಂಬಂಧಿತ ಮಾಹಿತಿಯನ್ನು ಒಂದೇ ಕಡೆ ಲಭ್ಯವಾಗಿಸುವುದು ಹಾಗೂ ಮನೆಯ ಉಪಯೋಗಕ್ಕಾಗಿ ತರಕಾರಿ ಬೆಳೆಯುವ ಅಭ್ಯಾಸವನ್ನು ಉತ್ತೇಜಿಸುವುದು ಈ ಎರಡೂ ಯೋಜನೆಗಳ ಉದ್ದೇಶವಾಗಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಶೋಧನ ನಿರ್ದೇಶಕರಾದ ಡಾ. ದುಷ್ಯಂತ್ ಕುಮಾರ್ ಈ ಕಾರ್ಯಕ್ರಮವನ್ನು ಗ್ರಾಮಸ್ಥರು ಮತ್ತು ರೈತರು ಸದುಪಯೋಗಪಡಿಸಿಕೊಳ್ಳಬೇಕು, ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಕಾರ್ಯಗಳು ಗ್ರಾಮೀಣ ಅಭಿವೃದ್ಧಿಗೆ ಸಹಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ವಿಶೇಷಾಧಿಕಾರಿಗಳು ಡಾ. ಶಶಿಧರ್, ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ, ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ಈಗಿನ ಕಾಲದ ಅಗತ್ಯ ಮತ್ತು ಮಾಹಿತಿ ಕೇಂದ್ರವು ರೈತರಿಗೆ ಒಂದೇ ಸ್ಥಳದಲ್ಲಿ ಕೃಷಿ ಸಂಬಂಧಿತ ಜ್ಞಾನ ನೀಡುವ ಮಹತ್ವದ ಕೇಂದ್ರವಾಗಲಿದೆ ಎಂದು ಹೇಳಿದರು.
ಗ್ರಂಥಪಾಲಕರು ಡಾ. ಶಿವಣ್ಣ ಕೈತೋಟವನ್ನು ಉದ್ಘಾಟಿಸಿ, ಮನೆಯಲ್ಲಿ ತರಕಾರಿ ಬೆಳೆಸುವುದು ಆರೋಗ್ಯ ಮತ್ತು ಆರ್ಥಿಕ ದೃಷ್ಟಿಯಿಂದ ಮಹತ್ವದ್ದು. ಪ್ರತಿ ಮನೆಯೂ ಕೈತೋಟ ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಸ್ತರಣಾ ವಿಭಾಗದ ಪ್ರಾಧ್ಯಾಪಕರು ಹಾಗೂ ಕಾರ್ಯಕ್ರಮದ ಸಂಯೋಜಕರು ಡಾ. ಸಹನಾ ಎಸ್ ಕಾರ್ಯಕ್ರಮದ ಉದ್ದೇಶ, ಗ್ರಾಮಸ್ಥರು–ವಿದ್ಯಾರ್ಥಿಗಳು ಪರಸ್ಪರ ಕಲಿಕೆಯ ಅವಕಾಶಗಳ ಬಗ್ಗೆ ವಿವರಿಸಿದರು.
ಊರಿನ ಮುಖಂಡರಾದ ಶ್ರೀಯುತ ಪರಮೇಶ್ವರಪ್ಪ ತಮ್ಮ ಅನುಭವ ಹಂಚಿಕೊಂಡು, ವಿಧ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ನೀಡಿರುವ ಕೀಟ ರೋಗ ನಿರ್ವಹಣೆ ಮಾಹಿತಿ, ನಮಗೆ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು. ಗಜೇಂದ್ರಪ್ಪ ಮಾತನಾಡಿ ವಿಧ್ಯಾರ್ಥಿಗಳು ಗ್ರಾಮದಲ್ಲಿ ಮಾಡಿರುವ ಕೆಲಸಗಳು ಅತ್ಯಂತ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸಹಸಂಯೋಜಕರಾದ ಡಾ. ನಿರಂಜನ್ ಸಹಾಯಕ ಪ್ರಾಧ್ಯಾಪಕರು ಮಣ್ಣು ವಿಜ್ಞಾನ ವಿಭಾಗ ,ಕೃಷಿ ಮಹಾವಿದ್ಯಾಲಯದ ಸಿಬ್ಬಂದಿಗಳು , ಗ್ರಾಮ ಪಂಚಾಯಿತಿ ಹಾಗೂ ಧರ್ಮದರ್ಶಿ ಕಮಿಟಿ ಸದಸ್ಯರು ಮತ್ತು ಊರಿನ ಮುಖಂಡರು ಭಾಗವಹಿಸಿದ್ದರು.
ಕೃಷಿ ಮಾಹಿತಿ ಕೇಂದ್ರ ಹಾಗೂ ಕೈತೋಟದ ಪ್ರಾತ್ಯಕ್ಷಿಕೆಯನ್ನು ಗ್ರಾಮದ 150ಕ್ಕು ಹೆಚ್ಚು ರೈತರು, ಶಾಲಾ ವಿಧ್ಯಾರ್ಥಿಗಳು ಹಾಗೂ ಮಹಿಳೆಯರು ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.

Leave a Comment