ಹಿತ್ತಲ ಗ್ರಾಮದ ರೈತರಿಗೆ ಎರೆಹುಳು ಗೊಬ್ಬರ ತಯಾರಿಸುವ ವಿಧಾನದ ಬಗ್ಗೆ ಗುಂಪು ಚರ್ಚೆ ಕಾರ್ಯಕ್ರಮ
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಹಿತ್ತಲ ಗ್ರಾಮದ ರೈತರಿಗೆ ಎರೆಹುಳು ಗೊಬ್ಬರ ತಯಾರಿಸುವ ವಿಧಾನದ ಬಗ್ಗೆ ಗುಂಪು ಚರ್ಚೆ ಕಾರ್ಯಕ್ರಮವನ್ನು ಸಮುದಾಯ ಭವನದಲ್ಲಿ ಆಯೋಜಿಸಿದ್ದರು.
ಈ ಕಾರ್ಯಕ್ರಮದ ಉದ್ದೇಶವೇನೆಂದರೆ ಎರೆಹುಳು ಗೊಬ್ಬರವನ್ನು ತಯಾರಿಸುವ ವಿಧಾನ,ಬೇಕಾಗುವ ವಸ್ತುಗಳು ಮತ್ತು ಅದರ ಉಪಯೋಗಗಳ ಬಗ್ಗೆ ತಿಳಿಸಿಕೊಸುವುದಾಗಿತ್ತು.
ವರ್ಮಿ ಕಾಂಪೋಸ್ಟ್ ಎನ್ನುವುದು ಹುಳುಗಳ ಸಹಾಯದಿಂದ ತಯಾರಾಗುವ ನೈಸರ್ಗಿಕ ಗೊಬ್ಬರವಾಗಿದ್ದು, ಇದು ಜೈವಿಕ ಕೃಷಿಯ ಪ್ರಮುಖ ಅಂಶವಾಗಿದೆ. ಈ ಗೊಬ್ಬರ ತಯಾರಿಸಲು ಪಶುಮಲ, ತರಕಾರಿ ತ್ಯಾಜ್ಯ, ಒಣ ಎಲೆಗಳು, ಹುಲ್ಲು ಮುಂತಾದ ಸಸ್ಯಸಾಮಗ್ರಿಗಳನ್ನು ಬಳಸಲಾಗುತ್ತದೆ. ಹೊಂಡ ಅಥವಾ ಪ್ಲಾಸ್ಟಿಕ್ ಡಬ್ಬಿಯ ತಳದಲ್ಲಿ ಒಣ ಎಲೆಗಳ ಪದರ ಹಾಕಿ, ಅದರ ಮೇಲೆ ಪಶುಮಲ ಮತ್ತು ಸಸ್ಯ ತ್ಯಾಜ್ಯ ಮಿಶ್ರಣವನ್ನು ಹಾಕಿ,ರೆಡ್ ವರ್ಮ್ ಅಥವಾ ಆಫ್ರಿಕನ್ ನೈಟ್ ಕ್ರಾಲರ್ ಎಂಬ ಹುಳುಗಳನ್ನು ಬಿಡಲಾಗುತ್ತದೆ. ಸುಮಾರು 45–60 ದಿನಗಳಲ್ಲಿ ಈ ಮಿಶ್ರಣವು ಕಪ್ಪು ಬಣ್ಣದ, ಮೃದುವಾದ, ಪೋಷಕಾಂಶಗಳಿಂದ ಸಮೃದ್ಧವಾದ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ.
ವರ್ಮಿ ಕಾಂಪೋಸ್ಟ್ ಮಣ್ಣಿನ ಉರ್ವರಾಶಕ್ತಿ ಹೆಚ್ಚಿಸಿ, ನೀರಿನ ಶೋಷಣಾಶಕ್ತಿ ಸುಧಾರಿಸಿ, ಬೆಳೆಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮತ್ತು ದೀರ್ಘಕಾಲಿಕ ಕೃಷಿ ಅಭಿವೃದ್ಧಿಗೆ ಸಹಾಯಕವಾದ ಗೊಬ್ಬರ ತಯಾರಿಕಾ ವಿಧಾನವಾಗಿದೆ ಎಂದು ವಿಧ್ಯಾರ್ಥಿಗಳು ರೈತರಿಗೆ ತಿಳಿಸಿಕೊಟ್ಟರು ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ತಿಳಿಸಿ, ಎರೆಹುಳು ಗೊಬ್ಬರವನ್ನು ಅಳವಡಿಸಿಕೊಳ್ಳಲು ತಿಳಿಸಿಕೊಟ್ಟರು.

Leave a Comment