ಈಗಿನ ಕಾಲದಲ್ಲಿ ನೀರಿನ ಅಭಾವವು ಕೃಷಿ ಕ್ಷೇತ್ರದ ಪ್ರಮುಖ ಸವಾಲಾಗಿದೆ:ಸಹಾಯಕ ಪ್ರಾಧ್ಯಾಪಕರಾದ ಡಾ. ಬಸಮ್ಮ ಅಲದಕಟ್ಟಿ
ಶಿಕಾರಿಪುರ:ಈಗಿನ ಕಾಲದಲ್ಲಿ ನೀರಿನ ಅಭಾವವು ಕೃಷಿ ಕ್ಷೇತ್ರದ ಪ್ರಮುಖ ಸವಾಲಾಗಿದೆ. ಸಾಂಪ್ರದಾಯಿಕ ನೀರಾವರಿ ವಿಧಾನಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ವ್ಯರ್ಥವಾಗುತ್ತದೆ, ಇದರಿಂದ ಭೂಮಿಯ ತೇವಾಂಶ ಹಾಳಾಗುತ್ತದೆ ಮತ್ತು ಬೆಳೆ ಉತ್ಪಾದನೆಗೆ ದುಷ್ಪರಿಣಾಮ ಉಂಟಾಗುತ್ತದೆ.ಇಂದಿನ ನೀರಿನ ಕೊರತೆಯ ಕಾಲದಲ್ಲಿ ಹನಿ ನೀರಾವರಿ ರೈತರಿಗೆ ಉಳಿತಾಯದ ಜೊತೆಗೆ ಹೆಚ್ಚಿನ ಉತ್ಪಾದನೆ ನೀಡುವ ಶಾಶ್ವತ ಪರಿಹಾರವಾಗಿದೆ ಎಂದು ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸಮ್ಮ ಅಲದಕಟ್ಟಿ ತಿಳಿಸಿದರು.
ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಅಡಿಕೆ ಬೆಳೆಯಲ್ಲಿ ಹನಿ ನೀರಾವರಿಯ ಮಹತ್ವ ಮತ್ತು ಅದರಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ಸಮುದಾಯ ಭವನದಲ್ಲಿ ನಡೆದ ಗುಂಪು ಚರ್ಚೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು .
ಹನಿ ನೀರಾವರಿ ಒಂದು ಆಧುನಿಕ ನೀರಾವರಿ ವಿಧಾನವಾಗಿದ್ದು, ಇದರ ಮೂಲಕ ನೀರು ಹನಿ ಹನಿಯಾಗಿ ನೇರವಾಗಿ ಬೆಳೆಗಳ ಬೇರು ಭಾಗಕ್ಕೆ ಪೂರೈಸಲಾಗುತ್ತದೆ. ಈ ವಿಧಾನದಿಂದ ನೀರಿನ 40-60% ಉಳಿತಾಯವಾಗುತ್ತದೆ ಮತ್ತು ಮಣ್ಣಿನ ತೇವಾಂಶ ಸಮತೋಲನದಲ್ಲಿರುತ್ತದೆ. ನೀರನ್ನು ಜಾಣ್ಮೆಯಿಂದ ಬಳಸುವುದು ನಮ್ಮ ಭವಿಷ್ಯ ಪೀಳಿಗೆಗೆ ನೀಡಬಹುದಾದ ಅಮೂಲ್ಯ ಕೊಡುಗೆ, ಡ್ರಿಪ್ ಪೈಪ್‌ಗಳ ಶುದ್ಧೀಕರಣ, ಫಿಲ್ಟರ್‌ಗಳ ನಿರ್ವಹಣೆ ಹಾಗೂ ನಿಯಮಿತವಾಗಿ ಅವುಗಳನ್ನು ಪರಿಶೀಲಿಸುವ ಅಗತ್ಯವನ್ನು ತಿಳಿಸಿದರು. ಇದರ ಮೂಲಕ ನೀರಿನ ಒತ್ತಡ ಸಮತೋಲನದಲ್ಲಿದ್ದು, ಬೆಳೆಗಳ ಉತ್ಪಾದಕತೆ ಹೆಚ್ಚುತ್ತದೆ ಎಂದು ವಿವರಿಸಿದರು.ಜೊತೆಗೆ 20 ಎಕ್ಕರೆಗಿಂತ ಹೆಚ್ಚು ತೋಟವಿದಲ್ಲಿ ಸ್ಮಾರ್ಟ್ ಸಿಂಚನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಹೇಳಿದರು.
ಈ ಸಂದರ್ಭದಲ್ಲಿ ಊರಿನ ಮುಖ್ಯಸ್ಥರು, ಧರ್ಮದರ್ಶಿ ಅಧ್ಯಕ್ಷರು, ರೈತರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು.ಸ್ಥಳದಲ್ಲಿ ಹಾಜರಿದ್ದ ರೈತರು ತಮ್ಮ ತೋಟಗಳಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿ,ತಕ್ಕ ರೀತಿಯ ತಾಂತ್ರಿಕ ಹಾಗೂ ಪ್ರಾಯೋಗಿಕ ಪರಿಹಾರಗಳನ್ನು ಪಡೆದುಕೊಂಡರು.

Leave a Comment