ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ:ವಾಲ್ಮೀಕಿ ಎಂದರೆ ರಾಮಾಯಣ, ರಾಮಾಯಣ ಎಂದರೆ ವಾಲ್ಮೀಕಿ:ಮುಖ್ಯ ಶಿಕ್ಷಕ ಫೈಜ್ ನಟರಾಜ್

ಭದ್ರಾವತಿ: ಹಿಂದೂ, ಇಂದೂ, ಎಂದೆಂದಿಗೂ 
ಅಸತ್ಯದಿಂದ ಸತ್ಯದ ಕಡೆಗೆ, ಬಿಲ್ಲು ಬಾಣಗಳಿಂದ ಲೇಖನಿಯ ಕಡೆಗೆ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಸದ್ದು ಮಾಡಿದೆ ಎಂದು ಚಳ್ಳಕೆರೆ ತಾಲ್ಲೂಕಿನ ತಳುಕು ಶಾಲೆಯ ಮುಖ್ಯ ಶಿಕ್ಷಕ ಫೈಜ್  ನಟರಾಜ್ ತಿಳಿಸಿದರು. 

ತಾಲ್ಲೂಕು ಆಡಳಿತ, ನಗರಸಭೆ, ತಾಲ್ಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ತಾಲ್ಲೂಕಿನ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವಾಲ್ಮೀಕಿ ಎಂದರೆ ರಾಮಾಯಣ, ರಾಮಾಯಣ ಎಂದರೆ ವಾಲ್ಮೀಕಿ. ಪ್ರತಿಯೊಬ್ಬರು ವಾಲ್ಮೀಕಿ ರಾಮಾಯಣದ ಕೆಲವು ಅಂಶಗಳನ್ನಾದರೂ ಓದಿ ಅದರ ಸಾರವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 

ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿಕೆ ಮೋಹನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷರು ಹಾಗೂ ಸಮಾಜ ಬಾಂಧವರ ಸಹಕಾರದೊಂದಿಗೆ ಇಂದು ವಾಲ್ಮೀಕಿ ಜಯಂತಿ ಯಶಸ್ವಿಯಾಗಿ ನಡೆಯುತ್ತಿರುವುದು ಅಭಿನಂದನಿಯ. 2025 ರ ಮಹರ್ಷಿ ವಾಲ್ಮೀಕಿ ಜಯಂತಿಯ ವೇಳೆಗೆ ನೂತನ ವಾಲ್ಮೀಕಿ ಭವನ ನಿರ್ಮಾಣ ಪೂರ್ಣಗೊಳಿಸಲು ಶಾಸಕರ ಸಹಕಾರದೊಂದಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ. ನಗರದ ಒಂದು ಮುಖ್ಯ ರಸ್ತೆ ಅಥವಾ ವೃತ್ತಕ್ಕೆ ಮಹರ್ಷಿ ವಾಲ್ಮೀಕಿ ಯವರ ಹೆಸರು ನಾಮಕರಣಕ್ಕೆ ನಗರಸಭೆಯ ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಘೋಷಿಸಿದರು. 

ನಗರ ಸಭೆಯ ಪ್ರಭಾರ ಅಧ್ಯಕ್ಷ ಎಂ ಮಣಿ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಲತಾ ಚಂದ್ರಶೇಖರ್, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಸರ್ವಮಂಗಳ ಭೈರಪ್ಪ, ಸದಸ್ಯೆ ಮಂಜುಳಾ ಸುಬ್ಬಣ್ಣ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷ ಎಸ್.ಮಣಿಶೇಖರ್, ಸೂಡಾ ಸದಸ್ಯ ಹೆಚ್.ರವಿಕುಮಾರ್ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ವಾಲ್ಮೀಕಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ತಹಶೀಲ್ದಾರ್ ಕೆ.ಆರ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ಧಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸವಿತಾ ಸ್ವಾಗತಿಸಿದರು. 

ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಸನ್ಮಾನಿಸಿ  ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಹುತ್ತ ಬಸ್ ನಿಲ್ದಾಣದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ಸೇರಿದಂತೆ ಸಮಾಜದ ಹಾಗೂ ವಿವಿಧ ಅಧಿಕಾರಿಗಳೊಂದಿಗೆ  ಮೆರವಣಿಗೆ ಮೂಲಕ ವೇದಿಕೆ ಸ್ಥಳ ತಲುಪಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.