ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ- ಸಂಭ್ರಮ: ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ

ಶಿವಮೊಗ್ಗದಲ್ಲಿ ಕನ್ನಡ ರಾಜ್ಯೋತ್ಸವದ 50 ಸಂಭ್ರಮ ಪ್ರಯುಕ್ತ ಜೈಭುವನೇಶ್ವರಿ ದೇವಿಯ ಉತ್ಸವದ ಮೆರವಣಿಗೆ ಸೈನ್ಸ್ ಮೈದಾನದಿಂದ‌ ಹೊರಟು ಡಿಎಆರ್ ಮೈದಾನ ತಲುಪಿತು. ವಿವಿಧ ಇಲಾಖೆಗಳ ಸ್ಥಬ್ಧ ಚಿತ್ರಗಳ ಮೆರವಣಿಗೆ ನಡೆದಿದೆ. ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮೀ ಸ್ತಬ್ಧ‌ಚಿತ್ರ , ಜೋಗ ಜಲಪಾತ, ಗುಡವಿ ಪಕ್ಷಿಧಾಮ,  ಸ್ತಬ್ಧಚಿತ್ರ, ಕೆಎಸ್ ಆರ್ ಟಿಸಿ ವತಿಯಿಂದ‌ಸರ್ಕಾರದ ಶಕ್ತಿ ಯೋಜನೆಯ ಅಲಂಕಾರ ಮಾಡಲಾಗಿತ್ತು. ಹೀಗೆ  ವಿಬಿಧ ಇಲಾಖೆಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.
ಇಂದು ಬೆಳಿಗ್ಗೆ ನಗರದ ಡಿಎಆರ್ ಗ್ರೌಂಡ್ ನಲ್ಲಿ ಕನ್ನಡ ರಾಜ್ಯೋತ್ಸವದ 50 ಸಂಭ್ರಮ ಪ್ರಯುಕ್ತ ಎಂದಿನಂತೆ ಕಾರ್ಯಕ್ರಮದ ಏರ್ಪಾಟು ಮಾಡಲಾಗಿತ್ತು.
ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿರವರು ರಾಷ್ಟ್ರಧ್ವಜ ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದ ನಂತರ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಿದ ಸಂದೇಶ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಜನಪ್ರತಿನಿಧಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಕನ್ನಡಪರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮದ ಸ್ನೇಹಿತರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ನಾಗರೀಕ ಬಂಧುಗಳಿಗೆ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿದರು.
ಇಂದು ನವೆಂಬರ್ 01, ಕನ್ನಡ ರಾಜ್ಯೋತ್ಸವವನ್ನು ನಾಡಿನ ಎಲ್ಲರೂ ಅತ್ಯಂತ ಸಂಭ್ರಮ, ಸಂತೋಷದಿಂದ ಆಚರಿಸುತ್ತಿದ್ದೇವೆ. ಜಾತಿ, ಮತ, ಭಾಷೆ ಹಾಗೂ ಧರ್ಮಗಳನ್ನು ಮೀರಿದ ಎಲ್ಲಾ ಕನ್ನಡಿಗರ ಹಬ್ಬವಾಗಿರುತ್ತದೆ ಎಂದರು.ಅನೇಕ ವರ್ಷಗಳ ಹೋರಾಟದ ನಂತರ 1947ರಲ್ಲಿ ನಮಗೆ ಸ್ವಾತಂತ್ರ್ಯ ದೊರಕಿದ್ದರೂ ಸಹ ಕನ್ನಡದ ವಿವಿಧ ಪ್ರದೇಶಗಳು ಚದುರಿ ಹೋಗಿದ್ದವು. ತದನಂತರ ಅನೇಕ ಜನರ ಮತ್ತು ಸಂಘಟನೆಗಳ ಪ್ರಯತ್ನದಿಂದಾಗಿ ಫಜಲ್ ಅಲಿ ಆಯೋಗದ ವರದಿಯಂತೆ ಬಹುತೇಕ ಕನ್ನಡ ಪ್ರದೇಶಗಳೆಲ್ಲವೂ `ಒಂದಾಗಿ ಮೈಸೂರು ರಾಜ್ಯವೆಂದು 1956ರ ನವೆಂಬರ್ 01 ರಂದು ಉದಯವಾಯಿತು. ತದನಂತರ ಕನ್ನಡಿಗರ ಬಯಕೆಯಂತೆ 1973ರ ನವೆಂಬರ್ 01 ರಂದು ಕರ್ನಾಟಕ ಎಂದು 
ಮರುನಾಮಕರಣವಾಯಿತು ಎಂದರು.
ಕರ್ನಾಟಕ ಏಕೀಕರಣಕ್ಕೆ ಕಾರಣರಾದ ಆಲೂರು ವೆಂಕಟರಾವ್, ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ.ಶ್ರೀಕಂಠಯ್ಯ ಸೇರಿದಂತೆ ಅನೇಕ ಮಾನ್ಯರನ್ನು ನಾವೆಂದಿಗೂ ಸ್ಮರಿಸಬೇಕಾಗಿದೆ ಎಂದರು. ಈ ರಾಜ್ಯೋತ್ಸವ, ಭಾಷಾಭಿಮಾನ ನವೆಂಬರ್ ಮಾಹೆಗೆ ಸೀಮಿತವಾದರೆ ಸಾಲದು. ಪ್ರತಿನಿತ್ಯ ನಾವು ಕನ್ನಡಿಗರಾಗಿರಬೇಕು. ಕನ್ನಡ ನಮ್ಮ ಉಸಿರು, ಜೀವನಾಡಿಯಾಗಬೇಕು. ಆಂತರಿಕವಾಗಿ ಕನ್ನಡದ 
ಡಿಂಡಿಮ ಮೊಳಗಬೇಕು ಎಂದರು.
ಕನ್ನಡನಾಡು ವಿವಿಧ ಧರ್ಮ ಸಂಸ್ಕೃತಿಗಳ ಸಂಗಮವಾಗಿದೆ. ಮೌರ್ಯರು, ಗಂಗರು, ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಒಡೆಯರು ಮುಂತಾದ ಅನೇಕ ರಾಜ ಮನೆತನಗಳು ಈ ನಾಡಿಗೆ ನೀಡಿದ ಕೊಡುಗೆ ಅಪಾರ, ಕನಕದಾಸರು, ಪುರಂದರದಾಸರು, ಸರ್ವಜ್ಞರು ಇಂತಹ ಸಂತಕವಿಗಳು, ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬಸವಣ್ಣರಂತಹ ವಚನಕಾರರು ಬಾಳಿ ಬದುಕಿದ ನೆಲ ಈ ಹೆಮ್ಮೆಯ ಕನ್ನಡನಾಡು ಎಂದರು.ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿದ್ದು, ಕನ್ನಡದ 8 ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿರುವುದು ಸಂತೋಷದ ಸಂಗತಿಯಾಗಿರುತ್ತದೆ. ಇಡೀ ದೇಶದಲ್ಲೇ 2 ನೇ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ನಮ್ಮ ಕನ್ನಡ ಭಾಷೆ ಎಂದರು.ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳ ಮೂಲಕ 'ಕರ್ನಾಟಕ ಸಂಭ್ರಮ' ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷಣೆಯಡಿ 2023ರ ನವೆಂಬರ್ 1 ರಿಂದ 2024ರ ನವೆಂಬರ್ 1 ರವರೆಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕರ್ನಾಟಕ ಸಂಭ್ರಮವನ್ನು ಆಚರಿಸಲಾಗುವುದು. ಈ ದಿನ ಸಂಜೆ 5 ಗಂಟೆಗೆ ಎಲ್ಲಾ ಸಾರ್ವಜನಿಕ ಮೈದಾನಗಳಲ್ಲಿ ಕೆಂಪು ಹಳದಿ ಬಣ್ಣದ ಗಾಳಿಪಟಗಳನ್ನು ಹಾರಿಸಲು ಮತ್ತು ಸಂಜೆ 7 ಗಂಟೆಗೆ ಪ್ರತಿ ಮನೆ, ಅಂಗಡಿ, ಕಛೇರಿಗಳ ಮುಂದೆ ದೀಪಗಳನ್ನು ಹಚ್ಚುವುದರ ಮೂಲಕ ಈ ಸಂಭ್ರಮದಲ್ಲಿ ಜಿಲ್ಲೆಯ ಎಲ್ಲಾ ನಾಗರೀಕರೂ ಸಹ ಭಾಗಿಯಾಗುವಂತೆ ಕೋರಿದರು. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪುರವರ ಈ ಕವಿಸಾಲುಗಳು ಅರ್ಥಪೂರ್ಣವೆನಿಸುತ್ತವೆ. “ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಉದಾತ್ತಭಾವದೊಂದಿಗೆ ಎಲ್ಲಾ ಕನ್ನಡಿಗರೂ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿ ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪತೊಡಬೇಕಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವರೇ ಪ್ರತಿ ಬಾರಿ ಧ್ವಜಾರೋಹಣ ನಡೆಸುತ್ತಾರೆ.ಆದರೆ ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಂದಿಲ್ಲ.
ಈ ಬಾರಿಯೂ ಮಕ್ಕಳ ನೃತ್ಯ ಮತ್ತು ಕನ್ನಡದ ಹಾಡುಗಳು ಹಾಡುವ ಮೂಲಕ ಸಂಭ್ರಮಿಸಲಾಗಿದೆ. ಸಾಂದೀಪಿನಿ ಶಾಲೆಯ ಮಕ್ಕಳಿಂದ‌ ಧರಣಿ ಮಂಡಲ, ಎನ್ಇಎಸ್ ಶಾಲೆಯಿಂದ ನೃತ್ಯ, ಬಿಜಿಎಸ್ ಶಾಲೆ, ಪೋದಾರ್ ಶಾಲೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು.

ದಾ.ರಾ.ಬೇಂದ್ರೆಯ ಒಂದೇ ಒಂದೇ ನಾವೆಲ್ಲರೂ ಒಂದೆ,  ಎಲ್ಲಾದರೂ ಇರು ಎಂತಾದರೂ ಇರು ಎಂಬ ಐದು ಹಾಡುಗಳ ನುಡಿನಮನ ಗೀತೆಗಳನ್ನ ಹಾಡಲಾಯಿತು. ವೀರಗಾಸೆ,, ಕೋಲಾಟ ಮೊದಲಾದ ಜಾನಪದ ನೃತ್ಯಗಳು ನಡೆದವು.
ಜಿಲ್ಲಾಧಿಕಾರಿಗಳ ಮಗ ಶಶಿವಿನ್ ನಾವೆನ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿ:ಶೇಷಾದ್ರಿಪುರಂನ ರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ಜಿಲ್ಲಾಧಿಕಾರಿಗಳ ಮಗ  ಶಶಿವಿನ್ ನಾವೆನ್ ಭಾಗಿಯಾಗಿದ್ದು ವಿಶೇಷವಾಗಿತ್ತು.ಮಿಲ್ಟ್ರಿ ಧಿರಿಸಿನಲ್ಲಿ ಬಂದಿದ್ದ ಶಶಿವಿನ್ ನಾವೆನ್ ಕನ್ನಡ ಬಾವುಟವನ್ನ ಹಿಡಿದು ನೃತ್ಯದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದಾನೆ.
ಜಿಲ್ಲೆಯ ಏಳು ವಿಧಾನ ಸಭಾ ಶಾಸಕರು ಹಾಜರಿರಬೇಕಿದ್ದ  ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶಾಸಕ ಚೆನ್ನಬಸಪ್ಪ, ಮೇಯರ್ ಶಿವಕುಮಾರ್, ಎಂಎಲ್ ಸಿ ರುದ್ರೇಗೌಡ ಮತ್ತು ಪಾಲಿಕೆಯ ಬೆರಳೆಣಿಕೆ ಸದಸ್ಯರು ಜಿಲ್ಲಾ ಅಧಿಕಾರಿಗಳು,ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಮತ್ತು ಶಾಲೆಯ ಮಕ್ಕಳು ಹೊರತು ಪಡಿಸಿದರೆ ಕಾರ್ಯಕ್ರಮದ ಗಣ್ಯರ ಗ್ಯಾಲರಿ ಖಾಲಿ ಖಾಲಿ ಇತ್ತು.ಸಾರ್ವಜನಿಕರ ಸಂಖ್ಯೆ ಬಹಳ ಕಡಿಮೆ ಇತ್ತು.ರಾಜ್ಯೋತ್ಸವದ ಸಂಭ್ರಮ ನಿರುತ್ಸಾಹದಿಂದ‌ ಕೂಡಿದ ರೀತಿಯಲ್ಲಿ ಕಂಡು ಬಂದಿತು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.