ಅನುದಾನಿತ ಶಾಲಾ-ಕಾಲೇಜುಗಳಲ್ಲೂ 3 ವರ್ಷ ವಯೋಮಿತಿ ವಿಸ್ತರಿಸಲು ಬಿಜೆಪಿ ನಿಯೋಗ ಮನವಿ
ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯಡಿಯ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 3 ವರ್ಷ ವಯೋಮಿತಿ ವಿಸ್ತರಿಸುವಂತೆ ಬಿಜೆಪಿ ನಿಯೋಗವು ಸಮಾಜ ಕಲ್ಯಾಣ ಅಪರ ಮುಖ್ಯ ಕಾರ್ಯದರ್ಶಿ ಮಣಿವಣ್ಣನ್ ಅವರನ್ನು ಭೇಟಿ ಮಾಡಿ ಗುರುವಾರ ಮನವಿ ಸಲ್ಲಿಸಿತು.
ಕಳೆದ ಸುಮಾರು 8 - 9 ವರ್ಷಗಳಿಂದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಸಾವಿರಾರು ಶಿಕ್ಷಕರು ಹಾಗೂ ಉಪನ್ಯಾಸಕರು ಬೋಧನೆ ಜೊತೆಗೆ ಉಚಿತ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಪೈಕಿ ಅನೇಕ ಶಿಕ್ಷಕರು ವಯೋಮಿತಿ ಮೀರುವ ಹಂತಕ್ಕೆ (ಕೇವಲ 1-2 ತಿಂಗಳು ಮಾತ್ರ ಬಾಕಿ ಇದ್ದು) ಬಂದಿದ್ದಾರೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2016 ರಿಂದ 2020 ರವರೆಗಿನ ವಯೋನಿವೃತ್ತಿ, ನಿಧನ, ಸ್ವಯಂ ನಿವೃತ್ತಿ ಇತ್ಯಾದಿ ಕಾರಣಗಳಿಂದ ಖಾಲಿಯಾಗಿದ್ದ ಸಾವಿರಾರು ಶಿಕ್ಷಕರ ಹುದ್ದೆಗಳನ್ನು ತುಂಬಿಕೊಳ್ಳಲು ಸರ್ಕಾರ ಇದೀಗ ಅವಕಾಶ ಮಾಡಿಕೊಟ್ಟಿದೆ. ವಯೋಮಿತಿ ಮೀರುವ ಹಂತಕ್ಕೆ ಬಂದಿರುವ ಶಿಕ್ಷಕರು ಹಾಗೂ ಉಪನ್ಯಾಸಕರು ಆತಂಕಗೊಂಡಿದ್ದಾರೆ.
ಆದ್ದರಿಂದ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ -ಸಿ, ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ನೇಮಕಾತಿ ಮಾಡಲು ಕೋವಿಡ್ - 19 ಕಾರಣ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ ಮಾಡಿ ಕಳೆದ ವರ್ಷ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಂತೆ ಅನುದಾನಿತ ಶಾಲಾ-ಕಾಲೇಜುಗಳಲ್ಲೂ 3 ವರ್ಷ ವಯೋಮಿತಿ ವಿಸ್ತರಿಸುವ ಮೂಲಕ ಶೀಘ್ರವಾಗಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿ, ವಯೋಮಿತಿ ಮೀರುವ ಹಂತದಲ್ಲಿರುವ ಶಿಕ್ಷಕರ ಜೀವನಕ್ಕೆ ದಾರಿದೀಪವಾಗಬೇಕು ಎಂಧು ನಿಯೋಗವು ಮನವಿಯಲ್ಲಿ ಆಗ್ರಹಿಸಿದೆ.
Leave a Comment